Wednesday 30 October 2013

ಆಚಾರವಿಲ್ಲದ ನಾಲಗೆ


ಆಚಾರವಿಲ್ಲದ ನಾಲಗೆ 

       ಅವಳ ಹೆಸರು ಸ್ವೇಚ್ಚಾ. ಹೆಸರಿಗೆ ತಕ್ಕಂತೆ ಬಿಂದಾಸ್ ಬದುಕು ಅವಳದ್ದು. ಮಾತಿಗೆ ಮಾತು, ಏಟಿಗೆ ಏಟು , ಏಲ್ಲವೂ ನೇರಾ ನೇರಾ. ಸುಂದರಿಯೇ.. ಆದರೂ ಅವಳ ಉಡುಗೆ ತೊಡುಗೆ ವಿಚಿತ್ರ. ಸೋ ಕಾಲ್ಡ್ ಮಾಡರ್ನ್ ಹುಡುಗಿ ಅಂತ್ಹೇಳಬಹುದು. ಅವಳು ತನ್ನ ಆಫೀಸಿಗೆ ಎಂಟ್ರಿ ಕೊಟ್ಳು ಅಂದ್ರೆ ಕೆಲಸ ಇಲ್ಲದ ಆಫೀಸಿನ ಪಡ್ಡೆಗಳು ಹಿಂದಿನಿಂದ ಆಕೆಯ ಬಗ್ಗೆ ಇಲ್ಲದ ಮಾತಾಡ್ತಾ.. ಆಕೆಯನ್ನ ಅಡಿಯಿಂದ ಮುಡಿಯವರೆಗೂ ಗಮನಿಸ್ತಾ..  ಆಕೆಯ ಸುತ್ತ ಕಥೆ ಕಹಾನಿ ಹೆಣೆಯುತ್ತಾ  ಕೂತಿರ್ತಿದ್ರು. ಹೆಣ್ಮಕ್ಳು ಏನ್ ಕಡಿಮೆ ಇಲ್ಲ ಬಿಡಿ. ನಾವು ಸಿಕ್ಕಾಪಟ್ಟೆ ಡೀಸೆಂಟು ಅಂತಾ ತೋರಿಸ್ಕೊಳ್ಳೋ ಚಟದಲ್ಲಿ ಈ ಹುಡುಗರ ಸಾಂಬಾರಿಗೆ ಒಗ್ಗರಣೆ ಹಾಕ್ತಿದ್ರು. ಒಟ್ನಲ್ಲಿ ಸ್ವೇಚ್ಚಾಗೆ ಅರಿವಿಲ್ಲದಂತೆ ಆಕೆ ಸರಿಯಿಲ್ಲದ ಹುಡುಗಿ ಅನ್ನಿಸಿಕೊಂಡ್ಬಿಟ್ಟಿದ್ಲು.. ಅದೇನಾಯ್ತೋ ಗೊತ್ತಿಲ್ಲ ಒಂದಿನ ಆಕೆ ತನ್ನ ಮನೆಯ ಬೆಡ್ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಿಕ್ಕಿದ್ಳು.. ಆವತ್ತಿನ ದಿನವೇ ಎಲ್ಲಾರಿಗೂ ಗೊತ್ತಾಗಿದ್ದು ಆಕೆ ಸಾಮಾನ್ಯ ಹೆಣ್ಣಲ್ಲ ಮನೆಯಲ್ಲಿ ಆರೋಗ್ಯ ಸರಿಯಿಲ್ಲದ ತಂದೆ ತಾಯಿ ಓದ್ತಾಯಿರೋ ತಮ್ಮ ತಂಗಿಯರ ಜವಾಬ್ದಾರಿಯನ್ನ ಹೊತ್ತಂತ ದಿಟ್ಟ ಹೆಣ್ಣು ಅಂತಾ. ಹೆಣ್ಣಿನ ಬಗ್ಗೆ ಒಂದು ಮಾತಿದೆ. A women’s greatest strength is her emotions and her greatest weakness is her emotions ಅಂತಾ. ತುಂಬಾ ನಿಜ ಅನ್ನಿಸ್ತು. ಜನರ ಮಾತಿಗೆ ಆ ಹೆಣ್ಣಿನ ಹೃದಯ ನಡುಗಿತ್ತು. ಒದ್ದಾಡಿತ್ತು , ಧೃತಿಗೆಟ್ಟಿತ್ತು. ಕೊನೆಗೆ ಸೋತಿತ್ತು.....  ಇದು ಒಂದು ಉದಾಹರಣೆಯಷ್ಟೆ. ಆದ್ರೆ ಇದಕ್ಕಿಂತಲೂ ಭೀಕರ ,ವಿಚಿತ್ರ ,ಸಮಾಜವೇ ಕೊಂದಂತ ಹೆಣ್ಣುಮಕ್ಕಳಿಗೆ ಮೋಸ್ಟ್ಲಿ ಲೆಕ್ಕಯಿಲ್ಲ. ಲೆಕ್ಕಯಿದ್ರೂ ಅದಿಕ್ಕೆ ಉತ್ತರವೇ ಇರಲ್ಲ ಬಿಡಿ.

ದೆಹಲಿಗ್ಯಾಂಗ್ ರೇಪ್ ,ಮನಿಪಾಲ್ ಗ್ಯಾಂಗ್ ರೇಪ್, ಧರ್ಣಸ್ಥಳ ಕೇಸ್ ಹೆಸರಿಸಬಹುದಾದ ಸುದ್ದಿ ಮಾಡ್ದಂತಹ ಕೆಲವು ಅತ್ಯಾಚಾರ ಪ್ರಕರಣಗಳು. ಆದ್ರೆ ಇವುಗಳಿಗೆ ಹೊರತಾಗಿ ಎಷ್ಟೋ ಲೆಕ್ಕವಿಲ್ಲದಷ್ಟು ಹೆಣ್ಣುಮಕ್ಕಳು ಅತ್ಯಾಚಾರಕ್ಕೊಳಗಾಗ್ತಿದ್ದಾರೆ .  ಅವರದ್ದು ಅರಣ್ಯರೋಧನವಾಗಿದೆ. ಕೃತ್ಯವೆಸಗಿದ ಕೆಲ ಪಾಪಿಗಳು ಕಾನೂನಿನ ಕೈಗೆ ಸಿಕ್ಕಿದ್ದಾರೆ. ಕೆಲವರು ಆರಾಮಾಗಿದ್ದಾರೆ. ಇಂಥ ಪಾಪಿಗಳಿಗೆ ಉಗ್ರಾತಿ ಉಘ್ರ ಶಿಕ್ಷೆಯಾಗಬೇಕು ಅನ್ನೋ , ಈಗಾಗಲೇ ಇರುವಂತ ಕೂಗಿಗೆ ನನ್ನದು ಒಂದು ದನಿ. ಆದ್ರೆ ಇಲ್ಲಿ ನಾನು ಹೇಳೋದಕ್ಕೆ ಹೊರಟಿರೋದು ಬೇರೆ. ರೇಪ್ ಮಾಡಿದಂತಹ ಕ್ರಿಮಿನಲ್ಗಳು ಬೇರೆ. ಇನ್ನು ಕೆಲವರು ನಮ್ಮ ನಿಮ್ಮ ನಡುವಿನಲ್ಲೇ ಅಕ್ಕಪಕ್ಕದ ಹೆಣ್ಣುಮಕ್ಕಳ ಬಗ್ಗೆ ಅಶ್ಲೀಲವಾಗಿ ಅವಹೇಳನಕಾರಿಯಾಗಿ ಮಾತನಾಡುವ ಚಾರಿತ್ರ್ಯವಧೆ ಮಾಡೋ ಕೀಚಕರಿದ್ದಾರೆ.ಅವರುಗಳು ದೈಹಿಕವಾಗಿ ಹೆಣ್ಣಿನ ಅತ್ಯಾಚಾರ ಮಾಡ್ದೇಯಿದ್ರೂ ಹೆಣ್ಣಿನ ಬದುಕನ್ನ ಹಾಳು  ಮಾಡೋದಕ್ಕೆ ಅವರ ಹಾಳು ನಾಲಗೆ ಸಾಕು. ಇಂಥವರೂ ನನ್ನ ಪ್ರಕಾರ ಅತ್ಯಾಚಾರಿಗಳೇ. Verbal rapistಗಳಿಂದ ನಿಜಕ್ಕೂ ಹೆಣ್ಣುಮಕ್ಕಳಿಗೆ ಅನ್ಯಾಯ ಆಗ್ತಿದೆ. ಇದು ಅಕ್ಷಮ್ಯ.
ನಿಮ್ಮ ಮನೆಯ ಮಗಳು ನಿಮ್ಮ ತಾಯಿ ತಂಗಿ ಹೆಂಡತಿ ಎಷ್ಟು ಒಳ್ಳೆಯವರೋ .. ಎಷ್ಟು ಮರ್ಯಾದಸ್ಥರೋ.. ಸಭ್ಯರೋ.. ನಿಮ್ಮ ಪಕ್ಕದ ಮನೆ ಮಹಿಳೆ , ನಿಮ್ಮ ಆಫೀಸಿನ ನಿಮ್ಮ ಕಲೀಗ್ ,ಸಮಾಜದಲ್ಲಿ ಯಾವುದೇ ಕ್ಷೇತ್ರದಲ್ಲಿ ಗುರುತಿಸಿಕೊಂಡ  ಹೆಣ್ಣು , ಅಥವಾ ಯಾರೇ ಆಗಿರಬಹುದು ಆಕೆ ಕೂಡ ಮರ್ಯಾದಸ್ಥಳೇ. ಆಕೆಗೂ ನಿಮ್ಮ ಮನೆಯ ಹೆಣ್ಣುಮಕ್ಕಳಂತೆ ಮಾನ ಅಭಿಮಾನ ಸ್ವಾಭಿಮಾನ ಇದೆ. ಆಕೆ ಸಾರ್ವಜನಿಕ ಸ್ವತ್ತಲ್ಲ ನಿಮ್ಮ ನಾಲಗೆಯ ಚಪಲ ತೀರಿಸಿಕೊಳ್ಳೋಕೆ.. ನಿಮ್ಮ ಗೌರವಕ್ಕೆ ಪಾತ್ರಳಾಗುವಂತ ಎಲ್ಲಾ ಹಕ್ಕು ಆಕೆಗಿದೆ. ನಿಮ್ಮ ಕಣ್ಣಿಗೆ ಇವರುಗಳೆಲ್ಲ ಸನ್ನಡತೆಯವರಲ್ಲ ಅಂತಾದ್ರೆ ನಿಮ್ಮ ಮನೆಯ ಹೆಣ್ಣುಮಕ್ಕಳಿಗೂ ಬೇರೆ ಬಳಗದಿಂದ ಅಂತಹುದ್ದೇ ಹೆಸರು ಬರಬಹುದು ಜೋಕೆ.
ಹೆಣ್ಣು ಒಂದು ಸುಂದರ ಜೀವ. ಆಕೆಯ ಯೋಚನೆ ಆಲೋಚನೆ ಎಲ್ಲವೂ ತಾನು ಪ್ರೀತಿಸುವವರಿಗಾಗಿ. ಆಕೆಗೊಂದು ಮುದ್ದಾದ ಮನಸ್ಸಿದೆ.  ಆಕೆ ನಿಮ್ಮ ಪ್ರೀತಿ ಅಭಿಮಾನಕ್ಕೆ ಅರ್ಹಳೇ ಹೊರತು ನಿಮ್ಮ ಕುಚೋದ್ಯಕ್ಕಲ್ಲ. ನಿಮ್ಮ ಕಾಮನೆಗಳ ಪೂರೈಕೆಗಲ್ಲ. ಅವಳನ್ನ ಹೊರಗಣ್ಣಿನಿಂದ ಅಳೆಯೋದನ್ನ ಬಿಟ್ಟುಬಿಡಿ... ವೇಷ್ಯೆ ಅನ್ನಿಸಿಕೊಂಡ ಹೆಣ್ಣು ಕೂಡ ಮನಸ್ಸಿನಾಳದಲ್ಲಿ ಭೋರ್ಗರೆಯುವ ನೋವಿನ ಸಮುದ್ರವನ್ನ ಹೊತ್ತಿರ್ತಾಳೆ. ಪರಿಸ್ಥಿಯ ಕೈಗೊಂಬೆಯಾಗಿರ್ತಾಳೆ. ಬೇರೆ ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುವ ಸಮಯವನ್ನ ನಮ್ಮ ಸುರಕ್ಷತೆಗಾಗಿ  ನಮ್ಮ ಮನೆಯ ಹೆಣ್ಣುಮಕ್ಕಳ ಸುರಕ್ಷತೆಗಾಗಿ, ಅವರುಗಳ ಏಳ್ಗೆಗಾಗಿ ಕಳೆದರೆ ಎಲ್ಲಾರಿಗೂ ಒಳ್ಳೇದಲ್ವಾ. ಕೆಲವರು ಮಾತಿನ ಈಟಿಗೆ ಎದೆ ಕೊಡ್ತಾರೆ. ಆದ್ರೆ ಕೆಲವರಿಗೆ ಆ ಮಾನಸಿಕ ಸ್ಥೈರ್ಯಯಿರೋದಿಲ್ಲ. ನಾವು ಮುಂದುವರೆದಿದ್ದೀವಿ, 21ನೇ ಶತಮಾನದಲ್ಲಿದ್ದೀವಿ ಅಂದ್ರೂ ಸಮಾಜ ಇನ್ನೂ ಶೇ 70ರಷ್ಟು ಹಳೆಯ ಮನಸ್ಥಿತಿಯಲ್ಲೇ ಇದೆ
ಕಾರಣವೇಯಿಲ್ಲದೆ ಹೆಣ್ಣುಮಕ್ಕಳ ಬಗ್ಗೆ ಕ್ಷಲ್ಲಕವಾಗಿ ಮಾತನಾಡುವ, ಚಾರಿತ್ರ್ಯವಧೆ ಮಾಡುವ ಎಲ್ಲಾರಿಗೂ ನನ್ನ ಹಾಗು ನನ್ನಂತ ಸಮಾನ ಮನಸ್ಕರ ಧಿಕ್ಕಾರ...

Friday 18 October 2013

 ಕಷ್ಟ ಸುಖಗಳಿಂದ ಯಾವ ವ್ಯಕ್ತಿಯೂ ಹೊರತಲ್ಲ. ಫ್ಲೇವರ್ ಸ್ವಲ್ಪ ಬೇರೆ  ಇರತ್ತೆ ಅಷ್ಟೆ. ಅದೇನೋ ಹೇಳ್ತಾರಲ್ಲಾ ಆನೆ ಭಾರ ಆನೆಗೆ, ಇರುವೆ ಭಾರ ಇರುವೆಗೆ ಅಂತಾ ಹಾಗೆ ನಮ್ಮಂತಾ ಮಿಡ್ಲ ಕ್ಲಾಸ್ ಜನಗಳಂತೂ ಪ್ರಾಬ್ಲೆಮ್ಸ್ ಅನ್ನೋ ಸಿಗ್ನಲ್ ಗೆ ಯಾವಾಗ್ಲೂ ರೀಚೆಬಲ್, ಕೈಕೊಡೋದು ಸುಖ ಸಂತೋಶದ  ನೆಟವರ್ಕ್ ಗಳೇ. ನಾನ್ ಹೈಸ್ಕೂಲ್ ಲ್ಲಿರೋವಾಗ ನಂಗೆ ಒಬ್ಳು ಫ್ರೆಂಡ್ ಇದ್ಲು... ಚೆಂದದ ಹುಡುಗಿ... ನಕ್ಕರೆ ಗಲ್ಲದ ಮೇಲೆ ಗುಳಿ ಬೀಳ್ತಿತ್ತು ಅವ್ಳಿಗೆ. ಹೆಸರು ನಿಧಿ. ಅವಳು ಎಷ್ಟು ಮುದ್ದಾಗಿದ್ದಳೋ ಅಷ್ಟೇ ಬುದ್ಧಿವಂತೆ. ಅಂದ್ರೆ ಚೆನ್ನಾಗ್ ಓದ್ತಿದ್ಲು. ನಾವು ಹೈಸ್ಕೂಲ್ ಫ್ರೆಂಡ್ಸ್ ಅಂತ್ಹೇಳಿದ್ನಲ್ವಾ. ಆ ಏಜೇ ವಿಚಿತ್ರ. ಕಂಡಿದ್ದಕ್ಕೆಲ್ಲಾ ಆಕಾಶ ಭೂಮಿ ಒಂದಾಗೋ ಥರ ನಗ್ತಿದ್ವಿ.  ಪೆದ್ದರ ಥರ ಎಲ್ಲಾದಕ್ಕೂ ಖುಶಿಪಡ್ತಿದ್ವಿ... ಹೀಗೇ ಆ ಮೂರು ವರ್ಷ ಕಳೆದುಹೋಯಿತು. ನಾವೆಲ್ಲಾ ಬೇರೆ ಬೇರೆ ಕಾಲೇಜ್ ಸೇರ್ಕೊಂಡ್ವಿ. ಸ್ವಲ್ಪ ದಿನ ಹಳೇ ಫ್ರೆಂಡ್ಸ್ ನ ಬಿಟ್ಟಿರೋಕೆ ಕಷ್ಟ ಆಗಿ ದಿನಾ ಫೋನ್ ಮಾಡ್ತಿದ್ವಿ. ಆಮೇಲಾಮೇಲೆ ಅವೆಲ್ಲಾ ನಿಂತೋಯ್ತು. ಹಾಗೇ ನಿಧಿ ಕೂಡ ಕಣ್ಮರೆಯಾದಳು. ನನಗೆ ನಿಧಿ ಅಂತಾ ಒಬ್ಬಳು ಸ್ನೇಹಿತೆ ಇದ್ದಳು ಅಂತಷ್ಚೇ ಚೆಂದದ ನೆನಪಾಗಿ ಉಳಿದಿತ್ತು.
ವರ್ಷಗಳೇ ಕಳೆದ್ಹೋದ್ವು. ಈ ಫ್ರೆಂಡ್ ಶಿಪ್ ಅನ್ನೋದೇ ಹಾಗೆ. ಎಷ್ಟೇ ವರ್ಷ ಆಗಿದ್ರೂ  ಚಿನ್ನದ ತರ ಅದರ ವಾಲ್ಯೂ ಅದಿಕ್ಕಿದ್ದೇಯಿರತ್ತೆ. ನಂದೂ ಡಿಗ್ರಿ  ಮುಗೀತು. ಕೆಲಸಾ ಅಂತಾ ಸೇರೀನೂ ಒಂದೆರೆಡು ವರ್ಷ ಸರ್ರಂತಾ ಕಳೆದ್  ಹೋಗ್ಬಿಡ್ತು. ಫ್ರೆಂಡ್ಸ್ ಯಾವಾಗ್ಲೂ ನೆನಪಾಗೋರು. ಮೀಟ್ ಆಗೋಣ ಅನ್ನಿಸೋದು. ಬಟ್ ಆಗ್ಲೇಯಿಲ್ಲ. ನಾನು ಹೊಟ್ಟೆಪಾಡಿಗೆ ಕಲಿತಿದ್ದನ್ನ ಒರೆಗೆ ಹಚ್ಚತಾಯಿದ್ದೀನಿ ಅಂದ್ರೆ ನನ್ನ ಸ್ನೇಹಿತರು ಕೂಡ ಅದನ್ನೇ ಮಾಡ್ತಿರಬಹುದು ಅಂದ್ಕೊಂಡಿದ್ದೆ. ಅಫ್ಕೋರ್ಸ್ ಕೆಲವ್ರು ಮಾಡ್ತಿದ್ದಾರೆ ಕೂಡ. ಆದ್ರೆ ನಾನ್ ಹೇಳಿದ ನನ್ನ ಸ್ನೇಹಿತೆ ನಿಧಿ ಒಂದೊಮ್ಮೆ ನಂಗೆ ಸಡನ್ ಆಗಿ ಕಾಲ್ ಮಾಡಿದ್ಲು. ನಾನು ಫುಲ್ ಜೋಶ್ ಲ್ಲಿದ್ದೆ. ಆಹಾ!! ಓಹೋ!! ಅಂತಾ ಮಾತಾಡ್ತಿದ್ದೆ. ಕೆಲವ್ ಸಲ ಜೋಶಲ್ಲಿ ಓವರ್ ಆಗೂ ಮಾತಾಡ್ಬಿಡ್ತೀನಿ.  ನಂದೇ ನಾನ್ ಏನೋ ದೊಡ್ಡು ಲೈಫ್ ಎಚೀವ್ಮೆಂಟ್ ಮಾಡ್ಬಿಟ್ಟಿದ್ದೀನೇನೋ ಅನ್ನೋ ಲೆವೆಲ್ಗೆ ಅವಳ ಹತ್ರ ಮಾತಾಡೋ ಭರದಲ್ಲಿ ಅವಳ ಬಗ್ಗೆ ಹೆಚ್ಚಿಗೆ ಏನೂ ತಿಳ್ಕೋಳ್ಳೋಕಾಗಿಲ್ಲ. ಯಾಕೇಂದ್ರೆ ಅವಳು ಜಾಸ್ತಿ ಮಾತಾಡ್ತಿರಲಿಲ್ಲ. ಆದ್ರೆ ಒಂದಂತೂ ನೋಟೀಸ್ ಮಾಡ್ದೆ. ಅಲ್ಲಿ ಆ ಹಳೆಯ ನಗುಯಿರಲಿಲ್ಲ. ಅಂದ್ಮೇಲೆ ಗಲ್ಲದ ಮೇಲೆ ಗುಳಿ ಬಿದ್ದಿರೋಕೂ ಛಾನ್ಸ್ ಇಲ್ಲ ಬಿಡಿ. ಮಾತಿನಲ್ಲಿ ನಿರಾಳತೆಯಿರಲಿಲ್ಲ. ಶಬ್ದಗಳು ಭಾರವಾಗಿ ಹೊರಗೆ ಬರ್ತಾಯಿತ್ತು. ಏನಪ್ಪಾ ನಾನು ವಯಸ್ಸಿಗ್ ಸರಿಯಾಗ್ ವರ್ತಿಸ್ತಾಯಿಲ್ವಾ ಅಥವಾ ನಿಧಿ ವಯಸ್ಸಿಗೆ ಮೀರಿ ಗಂಭೀರವಾಗಿದ್ದಾಳಾನಿಜವಾಗ್ಲೂ ಈ ಪ್ರಶ್ನೆ ಆವತ್ತು ಮನಸ್ಸಿನಲ್ಲಿ ಮೂಡಿತ್ತು.ಯಾಕೇಂದ್ರೆ, ನಮ್ಮ ನಗು,ತುಂಟತನ, ಕಾಡುಹರಟೆಗೆ ಜೊತೆಯಾಗ್ತಿದ್ದ ನಿಧಿ ಸಡನ್ನಾಗಿ ಇಷ್ಟೊಂದು ಬದಲಾಗೋದಕ್ಕೆ ಏನಪ್ಪಾ ಕಾರಣಾ? ಪ್ರಶ್ನೆ ಏಳ್ತಿದ್ದಹಾಗೆ ಮತ್ತೆ ಕಾಲ್ ಮಾಡ್ದೆ ಅವಳಿಗೆ.
‘’ಮದುವೆ ಆಯಿತು ಅಂದೆ ನಿಧಿ  ಆರಾಮಾಗಿದಿಯಾ ತಾನೇ?’’  ಕೇಳೇಬಿಟ್ಟೇ ಡೌಟ್ ಬಂದ್ರೆ ಸ್ಟ್ರೈಟ್ ಆಗ್ ಕೇಳ್ಬಿಡ್ಬೇಕು. ಅದ್ರಲ್ಲೂ ಸ್ನೇಹದಲ್ಲೆಂತಾ ಫಾರ್ಮಾಲಿಟೀಸ್.  ಆ ಕಡೆಯಿಂದ ಸ್ವಲ್ಪ ಹೊತ್ತು ವಾಯ್ಸ್ ಬರ್ಲಿಲ್ಲ. ನಾನು ‘’ನಿಧಿ..ನಿಧಿ..ಏನಾಯ್ತೇ...?’’ ಅಂತಾ ನಿಧಾನವಾಗಿ ಕೇಳ್ದೇ.  ಅವಳು ಅಳೋದಕ್ಕೆ ಸ್ಟಾರ್ಟ್ ಮಾಡಿದ್ಲು.  ನಂಗೆ ಅದು ಸ್ವಲ್ಪ ಹಿಡಿಸದೇಯಿರುವಂತದ್ದು. ಹೆಣ್ಣುಮಕ್ಕಳು ಅತ್ತುಬಿಟ್ಟರೇ.  ಜನ ಅಳ್ಸ್ತಾನೇಯಿರ್ತಾರೆ ಅನ್ನೋದು ನನ್ನ ವೈಯುಕ್ತಿಕ ಅಭಿಪ್ರಾಯ.  ‘’ನಿಧಿ ಸ್ವಲ್ಪ ಧೈರ್ಯ ತೊಗೊಂಡು ಹೇಳು ಏನಾಯ್ತು’’ ಅಂತಾ ಮತ್ತೆ ಕೇಳ್ದೆ. ಅವ್ಳು ಮೊದಲಿನಷ್ತು  ಕಂಫರ್ಟೆಬಲ್ ಇದ್ದಂತೆ ತೋರ್ಲಿಲ್ಲ. ಅದು ಸಹಜ ಕೂಡ. ನಮ್ಮ ನಡುವಿನ ಕಾಂಟಾಕ್ಟ್ ಇಲ್ಲದೇ 8 ವರ್ಷಕ್ಕೂ ಹೆಚ್ಚು ಕಳೆದು ಹೋಗಿತ್ತು. ಈಗ ಇದ್ದಕ್ಕಿದ್ದಹಾಗೆ ಬಂದು ಎಲ್ಲವನ್ನೂ ಹೇಳು ,ಅಂದ್ರೆ ಅವತ್ತವಳಿಗೆ ಹಿಂಸೆ ಆಗಿತ್ತು. ಹೋಗ್ಲಿ ಬಿಡು ನಿಧಿ ಇಷ್ಟಯಿಲ್ಲಾಂದ್ರೆ ಹೇಳ್ಬೇಡ ಅಂತಾ ಅವಳನ್ನರ್ಥ ಮಾಡ್ಕೊಂಡು ಫೋನಿಟ್ಟಿದ್ದೆ.
ನಿಧಿ ಏನೋ ಮುಚ್ಚಿಡ್ತಾಯಿದ್ದಾಳೆ ಅಂತಾ ಗೊತ್ತಾದ್ರೂ ನಾನು ಕೆದುಕೋಕೆ ಹೋಗಿರ್ಲಿಲ್ಲ. ನಾನು ನನ್ನದೇ ಕೆಲಸಗಳಲ್ಲಿ ಬ್ಯುಸಿ ಆಗ್ಬಿಟ್ಟೆ. ಇನ್ನಫ್ಯಾಕ್ಟ್ ನಿಧಿ ವಿಚಾರ ಮನಸ್ಸಿನ ಮೂಲೆಗೆ   ಸರಿದುಬಿಟ್ಟಿತ್ತು. ಫೇಸ್ಬುಕ್ ಲ್ಲಿ ನಿಧಿ ಮನೆಯ ಹತ್ತಿರವೇ ಇದ್ದ ನನ್ನ ಹಳೇ ಕ್ಲಾಸ್ಮೇಟ್ ಒಬ್ಬ ಆನ್ ಲೈನ್ ಸಿಕ್ಕಿದ್ದ. ಮಾತಾಡ್ತಾ ಮಾತಾಡ್ತಾ ನಿಧಿ ವಿಚಾರಾನೂ ಪ್ರಸ್ತಾಪ  ಆಯ್ತು. ಆಗ ಅವ್ನು ‘’ಅವಳದ್ದೆಂತ ಟ್ರಾಜಿಡಿ ಮಾರಾಯ್ತಿ, ಛೇ!! ’’ ಅಂತಾ ಶುರುಮಾಡ್ದವ್ನು, ಅವಳು ಮದುವೆಯಾಗಿ ವರ್ಷದ ಒಳಗೆ ಗಂಡನನ್ನ ಕಳೆದುಕೊಂಡಿದ್ದು, ಆಗ ನಿಧಿ ನಾಲ್ಕು ತಿಂಗಳ ಗರ್ಭಿಣಿ ಇದ್ದಧ್ಧು,  ಹೀಗೆ ಎಲ್ಲಾ ಹೇಳ್ತಾ ಹೋದ. ನನಗೆ ಅಳಬೇಕೋ,ಚೀರಬೇಕೋ, ಏನು ಮಾಡ್ಬೇಕು ಅಂತಾನೇ ತೋಚಿಲ್ಲಾ. ನಿಧಿನಾ ಗಟ್ಟಿ ಹಿಡ್ಕೊಂಡ್ ಬಿಡ್ಬೇಕು ಅನ್ನಿಸ್ಬಿಟ್ಟಿತ್ತು.  ರಾತ್ರಿ 9 ದಾಟಿತ್ತು, ಫೋನ್ ಮಾಡ್ಬಾರ್ದಿದ್ ಟೈಮ್ ಏನ್ ಆಗಿರ್ಲಿಲ್ಲ. ಕಣ್ಣಂಚಲ್ಲಿ ನೀರಿತ್ತು, ಮನಸ್ಸಿನಲ್ಲಿ ದುಖಯಿತ್ತು,  ಬೇಸರಯಿತ್ತು, ನಿಧಿಯನ್ನ ಕೇಳಬೇಕು ಅನ್ನಿಸ್ತಿದ್ದ ಸಾವಿರ ಪ್ರಶ್ನೆಗಳಿದ್ವು.  ಮೊಬೈಲ್ ತಗೊಂಡು ನಂಬರ್ ಒತ್ತೋದಕ್ಕೆ ಹೊರಟವಳಿಗೆ ಕಾಲ್ ಮಾಡ್ಲಾ ,ಬೇಡಾವಾ ಅನ್ನೋ ಕನ್ಫ್ಯೂಶನ್. ಕೊನೆಗೂ ಬೇಡ ಅಂತಾ ಡಿಸೈಡ್ ಮಾಡಿ ಆ ರಾತ್ರಿ ಸುಮ್ಮನಾಗಿದ್ದೆ. ಬೆಳಿಗ್ಗೆ ಎದ್ದಾಗಲೂ ಮನಸ್ಸು ಭಾರ. ತಡೀಲಿಲ್ಲ .ಕಾಲ್ ಮಾಡೇಬಿಟ್ಟೆ ‘’ನಿಧಿ ಹೇಗಿದ್ದೀಯಾ?’’ ಕೇಳಿದೆ. ಅವಳು ಶೀತು ಲಾಸ್ಟ್ ಟೈಮ್ ನಿನ್ಹತ್ರ ಜಾಸ್ತಿ ಮಾತಾಡೋಕಾಗಿಲ್ಲ, ಅಂತಾ  ಮಾತು ಶುರು ಮಾಡಿದವಳು ಒಂದುವರೆ ಘಂಟೆ ಮಾತಾಡಿದ್ಲು. ನನಗೆ ಫೋನಿಟ್ಟಾಗ ತಲೆ ಸುತ್ತೋ ಅನುಭವ. ಆಗ ನಿಧಿಗಿನ್ನು 25ರ ವಯಸ್ಸು. 70ಕ್ಕಾಗುವಷ್ಟು ಅನುಭವಿಸಿದ್ದಾಳಲ್ಲ ಅನ್ನಿಸಿಬಿಟ್ಟಿತ್ತು.
ನಿಧಿ sslcಯಲ್ಲಿ ಶೇ 85 ತೊಗೊಂಡು ಪಾಸಾಗಿದ್ದಳು. ಸಹಜವಾಗೇ ಕನಸುಗಳಿದ್ದ ಹುಡುಗಿಯಾಗಿದ್ದರಿಂದ ಸೈನ್ಸ್ ತೊಗೊಂಡ್ಲು. ಆದರೆ ನಿಧಿ ಮನೆಯವರು ಅಷ್ಟೊಂದು ಅನುಕೂಲಸ್ಥರಲ್ಲದ ಕಾರಣ ಸೆಕೆಂಡ್ ಪಿಯುಸಿ ಮುಗೀತಾಯಿದ್ದ ಹಾಗೆ ಬೆಂಗಳೂರಿನ ಕಡೆ ಒಳ್ಳೆ ಸಂಬಂಧ ಬಂದಿದೆ ಅಂತ  ಮದುವೆ ಮಾಡಿ ಕೈತೊಳ್ಕೊಂಡ್ಬಿಟ್ಟಿದಾರೆ. ನಾನು ನಿಧಿ ಮನೆಗೆ ಒಮ್ಮೆ ಹೋದಾಗ ಮದುವೆ ಫೋಟೋ ತೋರಿಸಿದ್ದಳು. ಘಡೂತಿ ದೇಹದ ವ್ಯಕ್ತಿಯ ಪಕ್ಕ ನಮ್ಮ ಪುಟಾಣಿ ಗುಬ್ಬಚ್ಚಿ ಮರಿ ನಿಧಿ. ವಿವಾಹದ ದೃಶ್ಯ, ವಯಸ್ಸಿನ ಅಂತರ, ಎಲ್ಲವೂ ಕಣ್ಮುಂದೆ ಬಂತು ಬಿಡಿ. ಆದರೆ ಮದುವೆ ಮುಗಿದು ಒಂದು ವರ್ಷದ ಒಳಗಾಗಿಯೇ ,ನಿಧಿ 4 ತಿಂಗಳ ಗರ್ಭಿಣಿ ಇರೋವಾಗಲೇ ,ಆರೋಗ್ಯದ ಸಮಸ್ಯೆಯಿಂದ ಗಂಡನನ್ನ ಕಳ್ಕೊಂಡಿದ್ಲು. ‘’ಹೋಗ್ಲಿ ಆ ಒಂದು ವರ್ಷಾನಾದ್ರೂ ಸಂತೋಷದಿಂದ ಇದ್ಯಾ ನಿಧಿ? ‘’ಅಂದ್ರೆ ,ಒಂದು ನಗು ಬಿಸ್ಹಾಕಿದ್ಲು ನೋಡಿ, ಎಲ್ಲಾ ಅರ್ಥಾ ಆಗೋಗಿತ್ತು.  ಅದಾದ ಮೇಲೆ ದಿನ ದಿನವೂ ನರಕ ಅನುಭವಿಸ್ತಾಯಿದ್ದೀನಿ. ಗಂಡನ ತಮ್ಮಂದಿರೇ ನನ್ನನ್ನ ಕೆಟ್ಟದಾಗಿ ಕಂಡರು. ಗಂಡನ ಮನೆಯಿಂದ ಕಿಂಚಿತ್ತೂ ಸಹಾಯ ಸಿಕ್ಕಿಲ್ಲ  ಶೀತು ಅಂತಾ ಬಿಕ್ಕಿ ಬಿಕ್ಕಿ ಅತ್ತಳು. ಈಗ ಹೇಗೊ ಚಿಕ್ಕದೊಂದು ಕೆಲಸ ಹುಡುಕ್ಕೊಂಡಿದ್ದೀನಿ. ಅಣ್ಣನ ಸಹಾಯವಿದೆ, ಅಮ್ಮನ ಆಸರೆಯಿದೆ ಅಂತಾ ಅವಳೇ ಅವಳಿಗಿರೋ ಮಾರ್ಗೋಪಾಯಗಳನ್ನ ನಾನ್ ಮಾತಾಡೋ ಮೊದಲೇ ಮಾತಾಡಿ ಮುಗಿಸಿದ್ಲು.
ಅವಳು ಎಷ್ಟು ಸುಲಭವಾಗಿ ‘’ನಾನು ಬದುಕ್ತೀನಿ ಶೀತಲ್,ಡಿಗ್ರಿ ಕಟ್ಟಿದ್ದೀನಿ, ಏನಾದ್ರೂ ಮಾಡ್ತೀನಿ, ನನ್ನ ಮಗನೇ ಈಗ ನನಗೆಲ್ಲ. ಅವನ ತುಂಟಾಟಗಳೇ ನನಗೆ ಜೀವನದ ಖುಷಿ’’  ಅಂತೆಲ್ಲಾ ಹೇಳ್ದಾಗ, ನನಿಗೆ ಗೊತ್ತಿತ್ತು. ಆವಳ ಪರಿಸ್ಥಿತಿಯಲ್ಲಿ  ಅವಳು ಆಡ್ತಾಯಿರೋ ಮಾತಿನಷ್ಟು ಸುಲಭ ಅವಳ ಜೀವನ ಆಗಿರಲಿಲ್ಲ. ಬಟ್ ಅವಳೊಳಗೊಂದು ಕಿಚ್ಚಿತ್ತು, ಹಠವಿತ್ತು, ಹುಂಬತನವಿತ್ತು  ಧೈರ್ಯವಿತ್ತು. ಅದನ್ನ ಕದಡಿಸೋಕೆ ನನಗಿಷ್ಟ ಆಗಿಲ್ಲ. ಸೈಲೆಂಟ್ ಆಗ್ಬಿಟ್ಟೆ. ಯಾರ್ಯಾರೊ ಯಾರ್ಯಾರಿಗೋ ಏನೇನಕ್ಕೋ ಹೋರಾಟಗಾರರ ಪಟ್ಟ ಕಟ್ತಾರೆ. ಆದ್ರೆ ನನ್ನ ಪ್ರಕಾರ ನಿಧಿಯೂ ಒಬ್ಬ ಹೋರಾಟಗಾರ್ತಿಯೇ.


ಶೀತಲಾಕ್ಷರ... ಹೌದು ನಾನು ನಿಮ್ಮ ಶೀತಲ್ ಶೆಟ್ಟಿ.. ಈ ಬ್ಲಾಗ್ ನನ್ನದೊಂದು ಹೊಸ ಪ್ರಯತ್ನ. ನನ್ನನ್ನ ನನ್ನಹಾಗೆ ನಿಮ್ಮ ಮುಂದಿಡೋ ಪ್ರಯತ್ನ.  ಮಾತು ಹಂಚಿಕೊಳ್ಳೋದ್ರಿಂದ ಮನಸ್ಸು ಹಗುರಾಗತ್ತೆ. ಯೋಚನೆಗಳನ್ನ ಹಂಚಿಕೊಳ್ಳೋದ್ರಿಂದ ಯೋಜನೆಗಳು ಹುಟ್ಟತ್ತೆ ..  ಇದು ನನ್ನ ವೈಯುಕ್ತಿಕ ಅಭಿಪ್ರಾಯ,,ಅದಕ್ಕೆ ಇದಕ್ಕಿಂತ ಉತ್ತಮ ವೇದಿಕೆ ಮತ್ತೊಂದಿಲ್ಲ ಅಂದ್ಕೋತೀನಿ..